ಹಣ್ಣು ತರಕಾರಿಗಳು, ಮೀನು, ಮೊಟ್ಟೆ ಮುಂತಾದ ಆಹಾರಗಳನ್ನು ದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವ್ಯಾಪಾರಗಾರರು ಸಾಗಿಸಲು ಸರಿಯಾದ ಚೀಲ, ಬುಟ್ಟಿ, ಡಬ್ಬ, ಲೋಹದ ಪಾತ್ರೆಗಳು ಮುಂತಾದುವು ಬೇಕಾಗುತ್ತವೆ. ಇವನ್ನು ವೈಜ್ಞಾನಿಕ ರೀತಿಯಲ್ಲಿ ರಚಿಸಿದರೆ ಆಯಾ ಆಹಾರಗಳು ಕೆಡದೆ ಸುರಕ್ಷಿತವಾಗಿ ಗುರಿ ತಲಪುತ್ತವೆ. ಅಸಮರ್ಪಕವಾದ ಪ್ಯಾಕೇಜಿಂಗ್ ಬಳಸಿದರೆ ಅವನ್ನು ಸಾಗಿಸುವಾಗ ಬಿಸಿ, ಅಣುಜೀವಿಗಳು, ತೇವ ಮುಂತಾದುವುಗಳಿಂದ ಆಹಾರ ಪದಾರ್ಥಗಳು ಕೆಡುತ್ತವೆ. ರೈಲು, ಬಸ್ಸು ಮುಂತಾದ ವಾಹನಗಳಲ್ಲಿ ಸಾಗಿಸುವಾಗ ಘರ್ಷಣೆಯಿಂದ ಅವು ಜಜ್ಜಿಹೋಗಬಹುದು. ಬಿದಿರು, ಕಾರ್ಡ್ಬೋರ್ಡು, ಪ್ಲೈವುಡ್, ಅಲ್ಯೂಮಿನಿಯಂ ರೇಕು ಮುಂತಾದ ಸುಲಭ ಬೆಲೆಯ ಪದಾರ್ಥಗಳಿಂದ ಹೇಗೆ ವಿವಿಧ ಆಹಾರಗಳಿಗಾಗಿ ಅವುಗಳ ಸಾಗಾಣಿಕೆಗೆ ತಕ್ಕ ಪ್ಯಾಕೇಜಿಂಗ್ ರಚಿಸಬಹುದೆನ್ನುವ ವಿಚಾರದಲ್ಲಿ ಪ್ರಯೋಗಗಳು ನಡೆಯುತ್ತಿವೆ. ಈಗಾಗಲೇ ಹಣ್ಣುಗಳು, ಮೀನು, ಮೊಟ್ಟೆ, ಟೀ ಮುಂತಾದ ಪದಾರ್ಥಗಳಿಗಾಗಿ ಕೈಗಾರಿಕೆಯವರಿಗೆ ಉತ್ತಮ ಪ್ಯಾಕೇಜಿಂಗ್ ವಿನ್ಯಾಸಗಳನ್ನು ಒದಗಿಸಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ